ಫ್ಲೇವೋನುಗಳು ಮತ್ತು ಫ್ಲೇವೊನಾಲುಗಳು - 
ಫ್ಲೇವೊನಾಲುಗಳು ಸಸ್ಯಜನ್ಯ ಹಳದಿ ವರ್ಣದ್ರವ್ಯಗಳು. ಲ್ಯಾಟಿನ್ ಭಾಷೆಯಲ್ಲಿ ಫ್ಲೇವೋನ್ ಪದದ ಅರ್ಥ ಹಳದಿ. ರಾಸಾಯನಿಕವಾಗಿ ಫ್ಲೇವೋನ್ ಎಂಬುದು 2-ಫೀನೈಲ್‍ಕ್ರೋಮೋನ್; ಫ್ಲೇವೋನಾಲ್ ಎಂಬುದು 3-ಹೈಡ್ರಾಕ್ಸಿಫ್ಲೇವೋನ್. ಫ್ಲೇವೋನುಗಳು ಫ್ಲೇವೋನಿನ ವ್ಯುತ್ಪನ್ನಗಳು. ಸಾಮಾನ್ಯವಾಗಿ ಸಸ್ಯಗಳಲ್ಲಿರುವ ಎಲ್ಲ ಫ್ಲೇವೋನುಗಳಲ್ಲಿ ಫ್ಲೇವೋನಿನ 5ನೆಯ ಮತ್ತು 7ನೆಯ ಸ್ಥಾನಗಳಲ್ಲಿ ಹೈಡ್ರಾಕ್ಸಿಪುಂಜಗಳು ಇದ್ದೇ ಇರುತ್ತವೆ.
ಮಾನವನಿಗೆ ಫ್ಲೇವೋನುಗಳು ಬಹಳ ಶತಮಾನಗಳಿಂದ ಗೊತ್ತು. ಯೂರೋಪಿಯನ್ನರಿಗೆ ಗೊತ್ತಿದ್ದ ಅತ್ಯಂತ ಹಳೆಯ ನೈಸರ್ಗಿಕ ವರ್ಣದ್ರವ್ಯ ಅಂದರೆ ಲ್ಯುಟಿಯೋಲಿನ್ ಎಂಬ ಫ್ಲೇವೋನ್. ಇದರ ಬಣ್ಣ ಹಳದಿ. ಇದು ವೆಲ್ಡ್ ಎಂಬ ಪರ್ಣ ಸ್ವರೂಪದ ಸಸ್ಯದ ಮುಖ್ಯ ವರ್ಣದ್ರವ್ಯ. ಹೂ, ಎಲೆ, ಹಣ್ಣುಗಳಿರುವ ವಿಧವಿಧವಾದ ಹಾಗೂ ಚಿತ್ತಾಕರ್ಷಕವಾದ ನೈಸರ್ಗಿಕ ಬಣ್ಣಗಳು ರಾಬರ್ಟ್ ಬಾಯ್ಲನ ಕಾಲದಿಂದಲೂ ವಿಜ್ಞಾನಿಗಳ ಕುತೂಹಲ ಕೆರಳಿಸಿವೆ. ಹೂಗಳಲ್ಲಿ ಎದ್ದು ಕಾಣುವ ಕೆಂಪು, ನೀಲಿ, ನೇರಿಳೆ ವರ್ಣ ಶ್ರೇಣಿಯ ವಿವಿಧ ಛಾಯೆಯಗಳಿಗೆ ಆ್ಯಂತೊಸೈಯೆ ನೀನ್ ಎಂಬ ಸಂಯುಕ್ತಗಳು ಕಾರಣವಾದರೆ ಹೂಗಳ ಎಸಳು ಮತ್ತು ಹೆಣ್ಣಿನ ತೊಗಟೆಗಳಲ್ಲಿರುವ ಹಳದಿ ಬಣ್ಣಕ್ಕೆ ಫ್ಲೇವೋನುಗಳು, ಫ್ಲೇವೋನಾಲುಗಳು ಮತ್ತು ಕೆರೊಟೀನುಗಳು ಕಾರಣ. ಆ್ಯಂತೊಸೈಯೆನೀನುಗಳು ಹಾಗೂ ಫ್ಲೇವೋನುಗಳು ಸಸ್ಯಗಳಲ್ಲಿರುವ ಸಹವರ್ಣದ್ರವ್ಯಗಳು. ಉದಾಹರಣೆಗೆ ಕೆಂಗುಲಾಬಿ ಹೂವಿನಲ್ಲಿ ಸೈಯೆನೀನ್ ಎಂಬ ಆ್ಯಂತೊಸೈಯನೀನ್ ಹಾಗೂ ಕ್ವೆರ್ಸೆಟಿನ್ ಮತ್ತು ಕೆಂಫೆರಾಲ್ ಎಂಬ ಫ್ಲೇವೊನಾಲ್ ಫ್ಲೇವೋನುಗಳ ಬಗ್ಗೆ ವ್ಯವಸ್ಥಿತ ವೈಜ್ಞಾನಿಕ ಆಭ್ಯಾಸ 1895ರಲ್ಲಿ ಫಾನ್ ಕೊಸ್ಟೆನೆಕಿ ಎಂಬ ವಿಜ್ಞಾನಿಯಿಂದ ಪ್ರಾರಂಭವಾಯಿತು. ಅವನು ಪಾಪ್ಲರ್ ಎಂಬ ಮರದ ಮೊಗ್ಗುಗಳಿಂದ ಪಿಕಾರ್ಡ್ ಎಂಬಾತ ತತ್ಪೂರ್ವ ಬೇರ್ಪಡಿಸಿದ್ದ ಕ್ರೈಸಿನ್ ಎಂಬ ಫ್ಲೇವೋನನ್ನು ಸಂಶ್ಲೇಷಿಸಿ ಅದರ ರಾಸಾಯನಿಕ ರಚನೆಯನ್ನು ಪತ್ತೆ ಹೆಚ್ಚಿದ. ಫ್ಲೇವೋನುಗಳನ್ನೂ ಫ್ಲೇವೋನಾಲುಗಳನ್ನೂ ಬೇರ್ಪಡಿಸಲಾಗಿದೆ. ಮೊದಲು ಫ್ಲೇವೋನುಗಳು ಹಾಗೂ ಫ್ಲೇವೊನಾಲುಗಳನ್ನು ಒಟ್ಟಾಗಿ ಆ್ಯಂತೊಕ್ಸಾಂತಿನ್ ಎಂದು ಕರೆಯುತ್ತಿದ್ದರು. ಆದರೆ 1952ರಲ್ಲಿ ಆ್ಯಂತೊಕ್ಸಾಂತಿನ್ ಹಾಗೂ ಸಂಬಂಧಿಸಿದ ಆಕ್ಸಿಜನ್‍ಯುಕ್ತ ವಿಷಮ ಚಕ್ರೀಯ ಹೆಟರೊಸೈಕ್ಲಿಕ್ ಸಸ್ಯಜನ್ಯ ಸಂಯುಕ್ತಗಳೆಲ್ಲವನ್ನೂ ಸೇರಿಸಿ ಫ್ಲೇವೊನಾಯ್ಡುಗಳು ಎಂದು ಕರೆಯಲು ನಿರ್ಧರಿಸ ಲಾಯಿತು. ಚರ್ಮವನ್ನು ಹದಮಾಡುವಲ್ಲಿ ಚಹಾ ಹಾಗೂ ಕೋಕೊ ತಯಾರಿಸುವುದಲ್ಲಿ ಮತ್ತು ಆಹಾರ ಪದಾರ್ಥಗಳಿಗೆ ಸುವಾಸನೆಕೊಡುವಲ್ಲಿ ಇವುಗಳಿಗೆ ಮಹತ್ತ್ವದ ಪಾತ್ರ ಉಂಟು.
(ಎಸ್.ವೈ.ಎ.)